Thursday 22 November 2018

ಕಾಲವಾಗುತ್ತಿದೆ ಕುತ್ತೆತ್ತೂರು ಅರಮನೆ - Beauty of Tulunad

ಕಾಲವಾಗುತ್ತಿದೆ ಕುತ್ತೆತ್ತೂರು ಅರಮನೆ - Beauty of Tulunad



ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಅರಮನೆಗಳಲ್ಲಿ  ಒಂದಾದ ಕುತ್ತೆತ್ತೂರು ಅರಮನೆ ಕ್ಷಯವಾಗುತ್ತಿದೆ. ಉಪ್ಪರಿಗೆಯ ಅಂದರೆ ಒಂದು ಮಹಡಿಯ ಈ ಅರಮನೆಯ ಹಂಚುಗಳನ್ನು ಅರ್ಧಭಾಗದಷ್ಟು ತೆಗೆಯಲಾಗಿದೆ. ಒಂದು ಭಾಗ ಕುಸಿದಿದೆ. ಇನ್ನರ್ಧವನ್ನು ಕೆಡವಿ ಹಾಕಲಾಗಿದೆ.

ಮಂಗಳೂರಿನಿಂದ ಸುರತ್ಕಲ್ಲಿಗೆ ಸಾಗುವ ಹೆದ್ದಾರಿಯಲ್ಲಿ ಎಡಕ್ಕೆ ತಿರುಗಿ ಮುಂದುವರೆದರೆ ಕುತ್ತೆತ್ತೂರು ಎಂಬಲ್ಲಿ ಹಸಿರಿನ ನೆಮ್ಮದಿ ಹೊದ್ದುಕೊಂಡು ಮಲಗಿದ ಪ್ರದೇಶದಲ್ಲಿ ಈ ಅರಮನೆ ಇದೆ. ಎದುರು ಭಾಗದಲ್ಲಿ ಕೆರೆಯೊಂದಿದೆ. ಅದರ ಪಕ್ಕದಲ್ಲಿ ಇನ್ನೊಂದು ಬಾವಿಯಂತಹ ರಚನೆ ಇದೆ. ಅದರ ಮಗ್ಗುಲಲ್ಲೇ ಶಿಲಾಶಾಸನವಿದೆ.

ಅರಮನೆಯ ಚಾವಡಿ ವಿಶಾಲವಾಗಿದೆ. ಬೃಹತ್ ಕಂಭಗಳು ಇದರ ಉಪ್ಪರಿಗೆಯನ್ನು ಆಧರಿಸಿ ಹಿಡಿದಿವೆ. ಗಟ್ಟಿ ಮುಟ್ಟಾದ ತೊಲೆಗಳು ಅರಮನೆಗೆ ಸುರಕ್ಷೆಯನ್ನು ಒದಗಿಸಿವೆ. ಕಂಭಗಳು ಅತ್ಯಂತ ನಾಜೂಕಿನ ಕುಸುರಿಕೆತ್ತನೆಯನ್ನು ಹೊಂದಿವೆ. ಇಲ್ಲಿ ನ್ಯಾಯ ತೀರ್ಮಾನಗಳಾಗುತ್ತಿದ್ದವು. ನ್ಯಾಯ ತೀರ್ಮಾನ ಮಾಡಲು ಕುಳಿತುಕೊಳ್ಳುವ ಸ್ಥಳದಲ್ಲಿ ಯಾವುದೇ ಕೆತ್ತನೆಗಳಿಲ್ಲದ ಕಂಬವೊಂದಿದೆ. ಅದರ ಅಡಿಯಲ್ಲಿ  ಮನೆಯ ಮಕ್ಕಳು ಕೂಡಾ ಕುಳಿತುಕೊಳ್ಳುವಂತಿರಲಿಲ್ಲ ಎನ್ನುವುದನ್ನು ಈಗ ವೃದ್ದಾಪ್ಯದಂಚಿನಲ್ಲಿರುವ ತಲೆಮಾರು ನೆನಪಿಸಿಕೊಳ್ಳುತ್ತದೆ.

ಮೂಲತಹ ಈ ಅರಮನೆ ಜೈನ ಮನೆತನಕ್ಕೆ ಸೇರಿದುದಾಗಿತ್ತು. ಕರ್ಣ  ಪರಂಪರೆಯ ಮೂಲಕ ಜನ ಮಾನಸದಲ್ಲಿ ಉಳಿದಿರುವ ಸಂಗತಿ. ಅರಸಿ ಜೈನ ಮಹಿಳೆಯೊಬ್ಬರು (ಪೊನ್ನು ಕುಂದಾಡ್ದಿ - ಈ ಬಗ್ಗೆ ಕೆ.ವಿ.ರಮೇಶ್ ಅವರ ತುಳುನಾಡಿನ ಪ್ರಾಚೀನ ಇತಿಹಾಸ ಪುಸ್ತಕದಲ್ಲಿ ಉಲ್ಲೇಖವಿದೆ) ಈ ಪರಿಸರದಲ್ಲಿ ಆಳ್ವಿಕೆ ಮಾಡಿದ ಬಗ್ಗೆ ಪಾಡ್ದನಗಳಲ್ಲಿ ತಿಳಿದು ಬರುತ್ತದೆ. ಈಕೆ ಮಾಯವಾದ ಅಂದರೆ ಸಮಾಧಿ ಸ್ಥಳ ಕುತ್ತೆತ್ತೂರಿನಲ್ಲಿ ಇದೆ. ಆಕ್ರಮಣದ ಸಂಧರ್ಭದಲ್ಲಿ ಜೈನರು ಅರಮನೆ ತೊರೆದು ಹೋಗುವಾಗ ಎದುರಿರುವ ಸಣ್ಣ ಕೆರೆಯಲ್ಲಿ ತಮ್ಮ ಅಮೂಲ್ಯ ಸೊತ್ತುಗಳನ್ನು ಹಾಕಿ ಊರುಬಿಟ್ಟು ಹೋದರು ಎನ್ನಲಾಗುತ್ತಿದೆ. ಸ್ಮರಣ ಪದ್ದತಿಯ ಈ ಇತಿಹಾಸವನ್ನು ದಾಖಲೆಗಳಿಲ್ಲ ಎಂಬ ಕಾರಣಕ್ಕೆ ತೀರಾ ತಳ್ಳಿ ಹಾಕುವಂತಿಲ್ಲ. ಪ್ರಖ್ಯಾತ ಇತಿಹಾಸಕಾರ ಡಾ. ಕೆ.ವಿ. ರಮೇಶ್ ಕೂಡಾ ಕರ್ಣ ಪರಂಪರೆಯಲ್ಲಿ ವಿಶ್ವಾಸಾರ್ಹ ಅಂಶಗಳಿವೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟವಾದ 1923 ಎಂ. ಗಣಪತಿ ರಾವ್ ಐಗಳ್ ಅವರ ’ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ “ ಕೃತಿಯಲ್ಲಿ “ಮಂಗಳೂರು ತಾಲೂಕಿನ ಬಲ್ಲಾಳರು” ಶೀರ್ಷಿಕೆಯಲ್ಲಿ ಕುತ್ತೆತ್ತೂರು ಮನೆತನದ ಬಗ್ಗೆ ವಿವರಗಳಿವೆ. ಕುತ್ತೆತ್ತೂರು, ಇಡ್ಯ, ಸುರತ್ಕಲ್ಲು, ಸಸಿಹಿತ್ಲು, ಚೇಳಾರು, ಸುರೆಯ, ದೇಲಂತಬೆಟ್ಟು , ಮಧ್ಯ ಗ್ರಾಮಗಳನ್ನು ಒಳಗೊಂಡ ಮೂರು ನಾಡುಗಳನ್ನು ಆಳಿಕೊಂಡಿದ್ದರು ಎಂಬ ಅಂಶ ಅದರಲ್ಲಿ ದಾಖಲಾಗಿದೆ. ಕುತ್ತೆತ್ತೂರಿನಲ್ಲಿ ಇವರ ಬೀಡು ಇದೆ. ಸುರತ್ಕಲ್ಲಿನ ಸದಾಶಿವ ದೇವಸ್ಥಾನವು ಸೀಮೆ ದೇವಸ್ಥಾನವಾಗಿದೆ. ಈ ಮನೆತನಕ್ಕೆ ಕಿನ್ನರಿ ಅರಸು ಮನೆತನ ಎಂಬ ಹೆಸರೂ ಇದೆ. ಅಳಿಯ ಕಟ್ಟನ್ನು ಇವರು ಪಾಲಿಸುತ್ತಿದ್ದರು.   ಮನೆಯ  ಒಳಭಾಗದಲ್ಲಿರುವ ಕಿಟಕಿಯ ಮೇಲೆ ನವಿಲಿನ ಚಿತ್ರಗಳಿವೆ. ಈ ವಿಶಾಲ ಮನೆಯಲ್ಲಿ ಬೆಳಕಿನ ಕೊರತೆ ಬಾರದಂತೆ ಮೇಲ್ಭಾಗದಲ್ಲಿ ತೆರೆದ ಅವಕಾಶವಿದೆ. ಇದರಿಂದ ಮಳೆಯ ನೀರು ಮನೆಯೊಳಗೆ ಬರುತ್ತಿತ್ತಾದರೂ ಬೆಳಕಿನ ಕೊರತೆ ಪರಿಹಾರವಾಗುವಂತೆ ರಚಿಸಲಾಗಿದೆ. ಅರಮನೆಯ ಪಟ್ಟದ ಕುರ್ಚಿ ಈಗ  ಬಾಲಾಲಯದಲ್ಲಿದೆ. ಅದರ ಮೇಲೂ ಕೆತ್ತನೆಗಳಿವೆ.

ಇತಿಹಾಸವೆಂದರೆ ಅದು ಭೂತಕಾಲ ಮತ್ತು ವರ್ತಮಾನಕಾಲದ ನಡುವಿನ ಸಂಭಾಷಣೆ. ಇದಕ್ಕೆ ಅವಕಾಶ ಮಾಡಿಕೊಡುವಂತಹ ಆಕರಗಳಲಿ ಅರಮನೆಗಳೂ ಒಂದು. ಕುತ್ತೆತ್ತೂರು ಅರಮನೆ ತುಳುನಾಡನ್ನು ಆಳಿದ ಅರಸುಮನೆತನಕ್ಕೆ ಸಂಬಂಧಿಸಿದ ಭೌತಿಕ  ಕೊಂಡಿ. ಹಿಂದೊಮ್ಮೆ ಇದಕ್ಕೆ ಬೆಂಕಿ ಬಿದ್ದಾಗ ಅದನ್ನು ಪುನರ್ನಿರ್ಮಿಸಲಾಗಿತ್ತು. ಅದಕ್ಕೆ ಹೊದಿಸಿದ ಹಂಚುಗಳ ಮೇಲೆ ತಯಾರಿಕೆ ಕಾಲವಾದ ೧೯೧೮ ಇಸವಿಯನ್ನು ಮುದ್ರಿಸಲಾಗಿದೆ. ಶತಮಾನಗಳನ್ನು ಕಂಡ ಈ ಅರಮನೆ ಇನ್ನು ಕೆಲವೇ ಕಾಲದಲ್ಲಿ ಕಾಲಗರ್ಭಕ್ಕೆ ಸೇರಿ  ಕಣ್ಮರೆಯಾಗುವ ಹಾದಿಯಲ್ಲಿದೆ. (Follow Beauty of Tulunad facebook page)

No comments:

Post a Comment