Wednesday 21 November 2018

ಪ್ರಾಚೀನ ತುಳು ಸಾಹಿತ್ಯಗಳು - ಡಾ| ಕಬ್ಬಿನಾಲೆ ವಸಂತ ಭಾರದ್ವಜ

ಪ್ರಾಚೀನ ತುಳು ಸಾಹಿತ್ಯಗಳು - ಡಾ| ಕಬ್ಬಿನಾಲೆ ವಸಂತ ಭಾರದ್ವಜ

1. ದೇವೀ ಮಹಾತ್ಮೆ :
ತುಳುವಿನಲ್ಲಿ ಲಭಿಸಿದ ಕೃತಿಗಳಲ್ಲೇ ಅತ್ಯಂತ ಪ್ರಾಚೀನವಾದ ಕಾವ್ಯವಿದು. ಸಂಸ್ಕೃತದ ಸಪ್ತಶತೀ ಎಂಬ ಪಾರಾಯಣ ಗ್ರಂಥದ ಅನುವಾದವಾಗಿರುವ ಈ ಕೃತಿಯ ತಾಡವಾಲೆ ಪ್ರತಿಯನ್ನು ಪುಲ್ಲೂರಿನ ತೆಂಕಿಲ್ಲಾಯರ ಮನೆಯಲ್ಲಿ ಡಾ| ವೆಂಕಟರಾಜ ಪುಣಿಂಚಿತ್ತಾಯರು ಸಂಶೋಧಿಸಿದ್ದಾರೆ. ಇವರ ಕಾಲವನ್ನು ಕ್ರಿ.ಶ. 1200 ಕ್ಕೆ ಒಯ್ಯಬಹುದಾಗಿದೆ. ಇಲ್ಲಿಯ ತುಳುಭಾಷೆಯಲ್ಲಿ ’ಸ್ಸ್’ ಕಾರ ವಿಶೇಷತೆ, ರಳಾಕ್ಷರ ಪ್ರಯೋಗ, ಅನೇಕ ವಿಭಕ್ತಿ ಪ್ರತ್ಯಯಗಳ ಬಳಕೆಯನ್ನು ಕಾಣಬಹುದು. ಈಗಿನ ತುಳುವಿನಲ್ಲಿ ಕಾಣದೇ ಇರುವ ಕರ್ಮಣಿ ಪ್ರಯೋಗ ಇಲ್ಲಿಯ ಮತ್ತೊಂದು ವಿಶೇಷತೆ.

2. ಮಹಾಭಾರತೊ :
ಉಡುಪಿಯ ಕೊಡವೂರಿನ ಅರುಣಾಬ್ಜ ಎಂಬ ಕವಿ ಇದರ ಕರ್ತೃ. ಕ್ರಿ.ಶ.1383 ರ ಸುಮಾರಿನಲ್ಲಿ ಈ ಕವಿಯಿದ್ದನೆಂದು ತಿಳಿಯಲಾಗಿದೆ. ಪುತ್ತೂರಿನ ಮೂಡನೂರು ಗ್ರಾಮದ ಮುಂಡ್ಯ ಶ್ರೀ ಲಕ್ಷ್ಮೀನಾರಾಯಣ ಕೇಕುಣ್ಣಾಯರ ಮನೆಯಲ್ಲಿದ್ದ ಈ ಕಾವ್ಯದ ತಾಳೆಗರಿ ಗ್ರಂಥವನ್ನು ಡಾ| ವೆಂಕಟರಾಜ ಪುಣಿಂಚಿತ್ತಾಯರು ಪತ್ತೆಹಚ್ಚಿದ್ದಾರೆ. ಕಾವ್ಯದಲ್ಲಿರುವ ಒಟ್ಟು ೧೬೫೭ ಪದ್ಯಗಳಲ್ಲಿ ೮೮೩ ಅಂಶ ಷಟ್ಪದಗಳೇ ಇರುವುದು ಈ ಕಾವ್ಯದ ವಿಶೇಷತೆ, ಜೊತೆಗೆ ತೋಟಕ, ತೋಟಕದೀರ್ಘ, ಮಹಾಮಾಲೆ ಮುಂತಾದ ವೃತ್ತಗಳ ಬಳಕೆಯೂ ಇದೆ. ಮಹಾಭಾರತದ ಆದಿಪರ್ವದ ಕಥೆಯೇ ಈ ಕಾವ್ಯದ ವಸ್ತು. ತುಳುನಾಡಿನ ೨೬ ವಾದ್ಯಗಳ ಉಲ್ಲೇಖ, ವಿವಿಧ ಮಕ್ಕಳ ಆಟಗಳು, ಮದುವೆ ಮಂಟಪದ ಚಮತ್ಕಾರದ ಗೊಂಬೆಗಳು, ಕೀಲುಕೊಡೆಗಳು, ತಂಪುನೀರಿನ ವಿತರಣೆ, ದೇವರಿಗೆ ಖರ್ಜೂರ ನೈವೇದ್ಯ ಭೂತಾರಾಧನೆ ಮುಂತಾದ ವೈಶಿಷ್ಟ್ಯಗಳಿಂದ ಈ ಕಾವ್ಯ ಗಮನಸೆಳೆಯುತ್ತದೆ.

3. ಶ್ರೀ ಭಾಗವತೊ:
ಇದರ ಕರ್ತೃ ವಿಷ್ಣುತುಂಗನೆಂಬವನು. ಇವನು ಹೇರೂರಿನವನು. ಜಾತಕ ಪದ್ಯದ ಆಧಾರದಿಂದ ಕ್ರಿ.ಶ. 1636 ರ ಕಾಲಘಟ್ಟದಲ್ಲಿದ್ದನೆಂದು ಹೇಳಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ ಇವನ ಕಾಲವನ್ನು ಕ್ರಿ.ಶ. 1370 ಎಂದು ನಿರ್ಣಯಿಸಲಾಗಿದೆ. ಮಧೂರು ಶಿವನಾರಾಯಣ ಶರಳಾಯರ ಮನೆಯಲ್ಲಿದ್ದ ಈ ತಾಡವಾಲೆ ಗ್ರಂಥವನ್ನು ಡಾ| ವೆಂಕಟರಾಜ ಪುಣಿಂಚಿತ್ತಾಯರೇ ಸಂಶೋಧಿಸಿದ್ದಾರೆ.
ಕವಿಯು ಅಲ್ಲಲ್ಲಿ ಬಳಸಿದ ಕಾವ್ಯಶೀರ್ಷಿಕೆಯ ಪದ್ಯಗಳಲ್ಲಿ ’ಶ್ರೀ ಭಾಗವತಾರ್ಥೊ’ ಎಂಬ ಸೂಚನೆಯಿರುವುದರಿಂದ ಕಾವ್ಯದ ಹೆಸರೇ ಹಾಗಿರಬೇಕೆಂದು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು ಊಹಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕವಿಯು ಉಡುಪಿಯ ಸಮೀಪದ ಹೇರೂರಿನವನೆಂದೂ ಅವರು ಹೇಳಿದ್ದಾರೆ. ಮೂರುಸ್ಕಂದಗಳ ವ್ಯಾಪ್ತಿಯಲ್ಲಿ ೪೯ ಅಧ್ಯಾಯಗಳಲ್ಲಿ ೧೯೮೮ ಪದ್ಯಗಳಿದ್ದು, ಸಂಸ್ಕೃತ- ಕನ್ನಡ ಭಾಗವತ ಕಾವ್ಯಗಳಿಗೆ ಹೋಲಿಸಿದರೆ ಇದು ತುಂಬಾ ಕಿರಿದೆಂದು ಹೇಳಬಹುದು. ಕೊನೆಯಲ್ಲಿ ಫಲಶ್ರುತಿಯಿಲ್ಲದಿರುವುದರಿಂದ ಈ ಕೃತಿಯು ಸಮಗ್ರವಾಗಿ ಲಭಿಸಿಲ್ಲವೆಂದೇ ಹೇಳಬಹುದು.

4. ಕಾವೇರಿ :
ಅಜ್ಞಾತ ಕರ್ತೃಕವಾದ ಈ ಕಾವ್ಯದ ಉಪಲಬ್ದ ಭಾಗ ಕಲ್ಲಿಕೋಟೆ ವಿಶ್ವವಿದ್ಯಾಲಯದ ಹಸ್ತಪ್ರತಿ ಭಂಡಾರದಲ್ಲಿ ದೊರಕಿದೆ. ಇದರ ಕಾಲವನ್ನು ಸುಮಾರು 14ನೆಯ ಶತಮಾನದ ಕೊನೆಯೆಂದು ಭಾವಿಸಲಾಗಿದೆ. ಸ್ಕಾಂದ ಪುರಾಣಾಂತರ್ಗತವಾದ ಕಾವೇರಿ ಮಹಾತ್ಮೆ ಇಲ್ಲಿಯ ವಸ್ತು. ಛಂದಸ್ಸು, ಭಾಷಾಪ್ರಯೋಗ, ಅಲಂಕಾರಗಳ ದೃಷ್ಟಿಯಿಂದ ಈ ಕಾವ್ಯ ಗಮನಾರ್ಹವಾಗಿದೆ. ಕಾವ್ಯವನ್ನು ನಿಂದಿಸುವ ಜನರನ್ನು ಕುರಿತ ಕವಿಯ ಹೇಳಿಕೆಯೊಂದು ಆ ಕಾಲದ ಸಾಹಿತ್ಯವಾತಾವರಣಕ್ಕೆ ಕನ್ನಡಿ ಹಿಡಿಯುತ್ತದೆ. ಅಂತೆಯೇ ತನ್ನ ಕಾವ್ಯ ’ಕಬ್ಬಿನ ಜಲ್ಲೆ ಸವಿದಂತೆ ಮುಂದುಮುಂದಕ್ಕೆ ಹೆಚ್ಚು ಸವಿಯಾಗುತ್ತಾ ಹೋಗುವಂತಹುದು’ ಎಂದು ಕವಿ ಹೇಳಿಕೊಂಡರೂ, ಕಾವ್ಯದ ಪೂರ್ಣಭಾಗ ದೊರಕದೇ ಹೋಗಿರುವುದು ವಿಪರ್ಯಾಸ ಎನ್ನಬಹುದು.

5. ತುಳು ರಾಮಾಯಣ :
ಈ ಕಾವ್ಯದ ತಾಡವಾಲೆ ಗ್ರಂಥವು ಬಂಟ್ವಾಳ ತಾಲೂಕಿನ ವಿಟ್ಲಸೀಮೆಯ ವಿಟ್ಲ ಅರಮನೆಯಲ್ಲಿ ದೊರಕಿದ್ದು, ಪ್ರಸ್ತುತ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಟಾನದಲ್ಲಿ ಸಂರಕ್ಷಿತವಾಗಿದೆ. ಈ ಕಾವ್ಯದ ಆರಂಭದ ಓಲೆಯಲ್ಲಿ ’ತುಳುಬರಹ-ತುಳುಭಾಷೆ ರಾಮಾಯಣ’ ಎಂಬ ಶೀರ್ಷಿಕೆಯಿದ್ದು ಇದನ್ನು ಡಾ| ಎಸ್.ಆರ್. ವಿಘ್ನರಾಜ ಸಂಪಾದಿಸಿದ್ದಾರೆ. ಇದರಲ್ಲಿ ಹದಿನೈದು ಅಧ್ಯಾಯಗಳಿದ್ದು ಇಕ್ಷ್ವಾಕುವಂಶದ ಚರಿತ್ರೆಯ ಕಥಾವಸ್ತುವಿದೆ. ಹತ್ತು, ಹನ್ನೊಂದು, ಹನ್ನೆರಡನೆಯ ಅಧ್ಯಾಯಗಳಲ್ಲಿ ರಾಮಾಯಣದ ಸಂಕ್ಷಿಪ್ತ ಕಥೆ ಕಂಡುಬರುತ್ತದೆ. ಇದು ವಿಷ್ಣುತುಂಗ ವಿರಚಿತ ’ಶ್ರೀ ಭಾಗವತೊ’ ಕಾವ್ಯದ ಒಂದು ಭಾಗವೇ ಆಗಿದೆಯೆಂದು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು ಅಭಿಪ್ರಾಯಪಡುತ್ತಾರೆ.

6. ತುಳು ಕರ್ಣಪರ್ವ :
ಈ ಕಾವ್ಯವನ್ನು ಬರೆದವನು ವಿಜಯನಗರದ ಅರಸನಾದ ಇಮ್ಮಡಿ ಹರಿಹರನೆಂಬವನು. ಈತನಿಗೆ ಹರಿಯಪ್ಪನೆಂದೂ ಹೆಸರಿದೆ. ವಿಜಯನಗರವನ್ನು ಆಳಿದ ಅರಸರು ’ತುಳುವ’ ವಂಶದವರಷ್ಟೇ ಅಲ್ಲ. ಅವರು ತುಳು ಭಾಷಿಗರೂ ಆಗಿದ್ದರೆಂದು ಇದರಿಂದ ತಿಳಿಯಬಹುದು. ಕರ್ಣನನ್ನು ಅರ್ಜುನನು ಜಯಿಸಿದಂತಹ ಕಥೆ ಇಲ್ಲಿಯ ಕಥಾವಸ್ತು. ಈ ಕಾವ್ಯದ ಆರಂಭದಲ್ಲಿರುವ ಕಾಲಸೂಚಕ ಪದ್ಯವೊಂದರ ಆಧಾರದಿಂದ ಕವಿಕಾಲವನ್ನು ಕ್ರಿ.ಶ. 1385 ಎಂದು ನಿರ್ಣಯಿಸಬಹುದಾಗಿದೆ. ಮುಖ್ಯವಾಗಿ ಅಂಶಷಟ್ಪದಿಯಲ್ಲಿ ರಚನೆಗೊಂಡ ಈ ಕವ್ಯ್ದಲ್ಲಿ ಇತರ ವೃತ್ತಗಳೂ ಬಳಕೆಯಾಗಿದೆ. ಗಣಪತಿಯನ್ನು ಸ್ತುತಿಸುತ್ತಾ ಕವಿಯು ಬಾಳೆಹಣ್ಣು,ಎಲೆ‌ಅಪ್ಪ,ಕಬ್ಬು ಉಂಡಲಿಗಳೊಂದಿಗೆ ಹಲಸಿನ ಹಣ್ಣನ್ನೂ ಅರ್ಪಿಸಿರುವುದು ವಿಶೇಷವಾಗಿದೆ. ಪೂರ್ವಕವಿಸ್ಮರಣೆ ಇರುವುದರಿಂದ ಈ ಕವಿಗಿಂತಲೂ ಹಿಂದೆ ತುಳುವಿನಲ್ಲಿ ಕಾವ್ಯಪರಂಪರೆಯಿದ್ದಿತೆಂದು ತಿಳಿಯಬಹುದಾಗಿದೆ.
ಈ ಎಲ್ಲಾ ಕಾವ್ಯಗಳಲ್ಲಿ ಶಿವಳ್ಳಿ ತುಳು ಭಾಷೆಯೇ ಬಳಕೆಯಾಗಿದೆ ಎಂಬುದು ಗಮನಾರ್ಹವಾಗಿದೆ.

ಪರಾಮರ್ಶನ ಗ್ರಂಥಗಳು
1. ತುಳು ದೇವೀ ಮಹಾತ್ಮೆ: (ಸಂ) ವೆಂಕಟರಾಜ ಪುಣಿಂಚಿತ್ತಾಯ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ.ಕಾಲೇಜು. ಉಡುಪಿ (1991)
2. ಮಹಾಭಾರತೊ : (ಸಂ) ವೆಂಕಟರಾಜ ಪುಣಿಂಚಿತ್ತಾಯ, ಕನ್ನಡ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು. (2000)
3. ಶ್ರೀ ಭಗವತೊ : (ಸಂ) ವೆಂಕಟರಾಜ ಪುಣಿಂಚಿತ್ತಾಯ, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು. (1984)
4. ಕಾವೇರಿ : (ಸಂ) ವೆಂಕಟರಾಜ ಪುಣಿಂಚಿತ್ತಾಯ, , ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ.ಕಾಲೇಜು. ಉಡುಪಿ. (೧1987)
5. ತುಳು ರಾಮಯಣ : (ಸಂ) ಎಸ್.ಆರ್. ವಿಘ್ನರಾಜ, ಶ್ರೀ ಮಂಜುನಥೇಶ್ವರ ಪುಸ್ತಕ ಪ್ರಕಶನ ಮಾಲೆ, ಉಜಿರೆ. (2005)
6. ಪಳಂತುಳು ಕಾವ್ಯ : ಡಾ| ಕಬ್ಬಿನಾಲೆ ವಸಂತ ಭಾರದ್ವಜ, ಮಧುಮತಿ ಪ್ರಕಾಶನ, ೧೨೫, ಮೊದಲ ತಿರುವು, ಬಸವೇಶ್ವರ ಬಡಾವಣೆ, ವಿಜಯನಗರ, ಬೆಂಗಳೂರು. (2001)

- ಡಾ| ಕಬ್ಬಿನಾಲೆ ವಸಂತ ಭಾರದ್ವಜ

No comments:

Post a Comment