Friday, 7 April 2017

ನನ್ನ ಮನದಾಳವನ್ನು ಸೆಳೆದ ತುಳು ಮಣ್ಣಿನ ಕಮ್ಮೆನ!

ನನ್ನ ಮನದಾಳವನ್ನು ಸೆಳೆದ..ತುಳು ಮಣ್ಣಿನ ಕಮ್ಮೆನ! - ತೇಜು ಕರ್ಕೇರ(ದಿಂಚು), ಮಡಿಕೇರಿ.


ನಾನು ಘಟ್ಟ ಪ್ರದೇಶದವನು, ನನ್ನ ಅಜ್ಜ ಮೂಲತ ತುಳುನಾಡಿನವರು. ಯಾವುದೋ ಕೆಲ ಕಾರಣಗಳಿಂದ ಆಗಿನ ಕಾಲದಲ್ಲಿ ತುಳುನಾಡಿನಿಂದ ಘಟ್ಟ ಪ್ರದೇಶಕ್ಕೆ ವಲಸೆ ಬಂದವರು.  ನಂತರದ ದಿನಗಳಲ್ಲಿ ತುಳುನಾಡಿನ ಸಂಪರ್ಕ ಕಡಿದೇ ಹೋಯಿತು. ಆ ಕಾಲದಲ್ಲಿ ಅನೇಕರು ಅನೇಕ ರೀತಿಯ ಕಾರಣಗಳಿಂದ ತುಳುನಾಡು ಬಿಟ್ಟು ಘಟ್ಟ ಸೇರಿದ್ದಾರೆಂದು ಅಜ್ಜ ಹೇಳಿದ ಮಾತು ಮತ್ತು ನಾನು ಹಲವರಿಂದ ಕೇಳಿ ತಿಳಿದಿದ್ದೆ.   ಹಾಗೇ ಊರು ಬಿಟ್ಟು ಬಂದವರು ಅಲ್ಲಿಯ ಕಲೆ ಸಂಸ್ಕೃತಿಯನ್ನು ಅಲ್ಲಿಗೆ ಬಿಟ್ಟರೊ ಅಲ್ಲ ಮರೆತರೊ ನನಗೆ ಅದರ ಅರಿವಿಲ್ಲ, ಒಂದೊಳ್ಳೆ ವಿಷಯವೆಂದರೆ ಅವರು ಕಲೆ ಸಂಸ್ಕೃತಿಯನ್ನು ಬಿಟ್ಟಿದ್ದರೂ ತುಳು ಭಾಷೆಯನ್ನು ಮಾತ್ರ ಬಿಡಲಿಲ್ಲ. ಆದ್ದರಿಂದ ನಾನು ಸಹ ತುಳು ಭಾಷೆ ಬಲ್ಲವನಾಗಿದ್ಧೆನೆಂದು ಹೆಮ್ಮೆ ಇದೆ.

ನನ್ನ ಶಾಲಾ ದಿನಗಳಲ್ಲಿ ನನ್ನ ಅಮ್ಮನ ಬಾಯಿಂದ ಕೆಲವೊಂದು ತುಳು ಜಾನಪದ ಹಾಡುಗಳು ಹೊರ ಬೀಳುತ್ತಿದ್ದವು, ಆ ಹಾಡುಗಳನ್ನು ಕುತೂಹಲದಿಂದ ಕೇಳುತ್ತಿದ್ದ ನಾನು ತುಳುನಾಡಿ ಬಗ್ಗೆ ತಿಳಿಯುವ ಕುತೂಹಲ. ಏನೋ ಒಂದು ಅವ್ಯಕ್ತ ಭಾವನೆಯಿಂದ ನನ್ನ ಮನಸ್ಸು ಆಗಾಗ ತುಳುನಾಡುಗಾಗಿ ತುಡಿಯುತ್ತಿತ್ತು. ನನ್ನ ಅಮ್ಮನ ಬಾಲ್ಯವು ಘಟ್ಟ ಪ್ರದೇಶದಲ್ಲೆ ಆದ್ದರಿಂದ ಅವರಿಗೂ ಅಷ್ಟರ ಮಟ್ಟಿಗೆ ತಿಳಿದಿರಲಿಲ್ಲ. ನಂತರದ ದಿನಗಳಲ್ಲಿ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ಕೊಂಚ ಕೊಂಚವೆ ಅಲ್ಲಿ ಇಲ್ಲಿ ಕೇಳುತ್ತಿದ್ದೆ. ಅದು ನನ್ನಲ್ಲಿಯ ತುಳುನಾಡಿನ ಬಗೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು.

ಅಲ್ಲಿನ ಭೂತ ಕೋಲ, ನೇಮ  (ದೈವರಾಧನೆ), ದೊಂದಿ ಬೆಳಕಿನ ಸೇವೆ (ಯಕ್ಷಗಾನ) ಹುಲಿ ಕುಣಿತ (ಪಿಲಿ ನಲಿಕೆ) ನಾಗಾರಾಧನೆ, ಕಂಬುಲ, ಕಡಲು  ನನ್ನನ್ನು ಬಹಳಷ್ಟು ಸೆಳೆಯುತ್ತಿತ್ತು. ಇದಕ್ಕೆಲ್ಲ ಕಾರಣವ ಹುಡುಕುತ್ತ ಹೋದಾಗ ಸಿಕ್ಕ ಉತ್ತರ.... ಇದು ನನ್ನ ಮಣ್ಣು, ನನ್ನ ಹಿರಿಯರು ನಡೆದಾಡಿದ ಪುಣ್ಯ ನಾಡು.  ಆ ಮಣ್ಣಿನ ಪರಿಮಳ, ಅಲ್ಲಿನ ಆಚರಣೆ,ಆರಾಧನಾ ಕ್ರಮಗಳು ಆಚಾರ ವಿಚಾರ, ನಡೆನುಡಿ ನನ್ನನ್ನು ಕೈ ಬೀಸಿ ಕರೆದಂತೆ ಭಾಸವಾಗುತ್ತಿತ್ತು.

 ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರ  ಜೊತೆಗಾರರೊಬ್ಬರು ತುಳುನಾಡಿನವರೇ ಆಗಿದ್ದರು, ಹೀಗೆ ಓಮ್ಮೆ ಮಾತನಾಡುತ್ತ ಅವರು ನಮ್ಮ ಮನೆಯಲ್ಲಿ ಯಕ್ಷಗಾನವಿದೆ ಬಾ ಹೋಗೋಣವೆಂದಗಾ ಅಂದಾದ ಖುಷಿ ಅಷ್ಟಿಷ್ಟಲ್ಲ,
ತುದಿಗಾಲಿನಲ್ಲಿ ಹೊರಟು ನಿಂತಿದ್ದೆ. ನಾನು ಟಿವಿ ಗಳಲ್ಲಿ ಆಟ ನೋಡಿದುಂಟು, ಆದರೆ ಇದು ನಾನು ಮೊದಲು ನೋಡಿದ ಯಕ್ಷಗಾನವಾಗಿತ್ತು. ಅಂದಹಾಗೆ ಅದು ಬ್ರಹ್ಮಾವರ ಹತ್ತಿರದ ಕೊಕ್ಕರ್ಣೆ ಎಂಬಲ್ಲಿ ಮಂದರ್ತಿ ಮೇಳವಾಗಿತ್ತು, ನೋಡಿ ತುಂಬಾ ಖುಷಿ ಪಟ್ಟೆ, ಆ ದಿನ ಇಂದಿಗೂ ನನ್ನ ಕಣ್ಮುಂದೆ ಇದೆ.
ಅದಾದ ನಂತರ ನೆನೆಸದೆ ಕೆಲ ಸಂಬಂಧಗಳು ತುಳುನಾಡಿನೊಂದಿಗಿನ ಕೊಂಡಿಯನ್ನು ಗಟ್ಟಿಗೊಳಿಸಿದವು.  . ಅದೆ ವರ್ಷ ನನ್ನ ಗೆಳೆಯರೊಬ್ಬರು ಮೂಲತ ಮಲ್ಪೆಯವರು ಹುಲಿ ವೇಷವನ್ನು ನನಗೆ ಪರಿಚಯಿಸಿದರು.
ನಂತರದ ದಿನಗಳಲ್ಲಿ ಕುಡ್ಲ( ಈಗಿನ ಮಂಗಳೂರು) ಒಡಿಪು(ಉಡುಪಿ) ನನಗೆ ತುಂಬಾ ಹತ್ತಿರವಾಯಿತು.

ಆ ದೈವ ದೇವರ ಆಶಿರ್ವಾದ ನನ್ನನ್ನು ಅರವತ್ತ ಕರೆಸಿಕೊಳ್ಳುತ್ತಿದ್ದರು. ಒಮ್ಮೆ ಯಾವುದೋ ಖಾಸಗಿ ಕೆಲಸದ ನಿಮಿತ್ತ ಮಂಗಳೂರಿಗೆ ತೆರಳಿದ್ದಾಗ ರಾತ್ರಿಯಾಗಿತ್ತು,  ಕೊಂಚ ಸುಸ್ತು, ನನ್ನ ಸಂಬಂಧಿಕರೊಬ್ಬರು ನಾ ಬಸ್ ಇಳಿಯುವಷ್ಟರಲ್ಲೆ ಒಂದು ಕೋಲ ಇದೆ ಹೋಗಿ ಬರುವ ಎಂದರು, ಅದು ನಾನೂ ಕರಾವಳಿ ಭಾಗದಲ್ಲಿ ನೋಡಿದ ಮೊದಲ ಭೂತ ಕೋಲವಾಗಿತ್ತು. ಅದನ್ನು ಕೇಳಿದಕ್ಷಣ ಆಯಾಸ ಮಾಯವಾದಂತೆ ಏನೋ ಒಂದು ರೀತಿಯ ಖುಷಿ ಆನಂದ ಮತ್ತೆ ಅಲ್ಲಿಂದ ಗಾಡಿ ಹತ್ತಿ ರಾತ್ತೋ ರಾತ್ರಿ ಬಾರಕೂರಿನ ಕಚ್ಚೂರ ಮಾಲ್ತಿದೇವಿ, ಬಬ್ಬೂ ಸ್ವಾಮಿಯ ಕೋಲ ಮುಗಿಸಿ ಬೆಳಗಿನ ಜಾವ ಹಿಂತಿರುಗಿದೆವು.

ನಾ ಮೇಲೆ ತಿಳಿಸಿದಂತೆ ನನ್ನ ಊರಿನೊಂದಿಗೆ ಹೊಸ ಸ್ನೇಹ ಸಂಬಂಧಗಳನ್ನು ನನಗೆ ಪರಿಚಯಿಸಿತು. ಆ ಸಂಬಂಧಗಳ ಬೆಸುಗೆಯ ಕೊಂಡಿ ಈಗ ನನ್ನನ್ನು ಕುಡ್ಲ, ಒಡಿಪು, ಕಾರ್ಲ(ಕಾರ್ಕಳ), ಬೆದ್ರ (ಮೂಡಬಿದರಿ) ಎಂದು ತಿರುಗಿಸುತ್ತಿದೆ. ನನ್ನ ತುಳು ಮಣ್ಣಿನ ಸೆಳೆತ ನನ್ನನ್ನು ಘಟ್ಟ ಪ್ರದೇಶದಿಂದ ತುಳುನಾಡಿನಾದ್ಯಂತ ಕೊಂಡೊಗಿದೆ.
ಈಗ ವರ್ಷದಲ್ಲಿ ಕಡಿಮೆ ಎಂದರೂ  ಮೂರು ನಾಲ್ಕು ಸಲ ತಿರುಗಾಡುತ್ತೆನೆ, ಸುಮ್ಮನೆ ಅಲ್ಲ ಕೋಲ ನೇಮ ನೋಡಬೇಕೆಂದು ನಮ್ಮ ಆಚರಣೆಯ ಬಗ್ಗೆ ತಿಳಿಯಬೇಕೆಂದು.

ಕಳೆದ ಮೂರು ವರ್ಷಗಳಲ್ಲಿ ಐದು ಆರು ಕಡೆ ತಿರುಗಿ ಕೆಲವು ದೈವಗಳ ಕೋಲ ನೇಮ ನೋಡಿದುಂಟು,
ಹಾಗೇಯೇ ಗರೋಡಿಗಳ ಆರಾಧನ ಕ್ರಮದ ಬಗ್ಗೆ ಹಾಗೂ ಗರೋಡಿಗಳಲ್ಲಿ ಆರಾಧನೆ ಪಡೆದುಕೊಂಡು ಬಂದಿರುವ ವೀರ ಪುರುಷರು ಕೋಟಿಚೆನ್ನಯರ  ಬಗ್ಗೆ ತಿಳಿಯುವ ಉದ್ದೇಶದಿಂದ ಕೆಲವು ಗರೋಡಿಗಳಿಗೆ ಹೋದದುಂಟು( ನಾ ಹೋದದ್ದು ಎನ್ನುದಕ್ಕಿಂತ ಅವರೆ ಕರೆಸಿಕೊಂಡಂದು ಎಂದರು ತಪ್ಪಾಗದು). ಹಾಗೆ ಕೆಲವು ಗರೋಡಿಗನ್ನು ತಿರುಗಿದರೆ ಬೈದೆರ್ಲೆ(ಕೋಟಿ-ಚೆನ್ನಯ್ಯರ) ನೇಮವನ್ನು ಶ್ರೀ ಬೆರ್ಮೆರ್  ಬೈದೇರುಗಳ ಗರೋಡಿ ಎಣ್ಮೂರು,ಪೂತ್ತುರು ತಾ|. ಶ್ರೀ  ಬೆರ್ಮೆರ್  ಬೈದೇರುಗಳ ಗರೋಡಿ ಅಗತ್ತಾಡಿ, ಪೂತ್ತುರು.  ಬೋಳೂರು ಶ್ರೀ  ಬೆರ್ಮೆರ್  ಬೈದೇರುಗಳ ಗರೋಡಿ ಮರ್ಣೆ, ಒಡಿಪು(ಉಡುಪಿ) ತಾ|.  ಶ್ರೀ  ಬೆರ್ಮೆರ್  ಬೈದೇರುಗಳ ಗರೋಡಿ ಪಕ್ಕಿಬೆಟ್ಟು, ಕಲ್ಯಾಣಪುರ, ಒಡಿಪು(ಉಡುಪಿ) ತಾ| ಗಳಲ್ಲಿ ನೋಡಿದ್ದೇನೆ, ಅಲ್ಲಿಯವರ ಸಹಕಾರ ಆದಾರಾತಿತ್ಯ
ಕೂಡ ಅಷ್ಟೆ ಹಿತವಾಗಿತ್ತು. ಎಲ್ಲ ಆ ಶಕ್ತಿಗಳ ಇಚ್ಚೆ.

ಕಡೆಗೂ ನನ್ನ ಆ ಬಾಲ್ಯದ ದಿನಗಳಲ್ಲಿ ಇದ್ದ ಆಸೆ ನನ್ನ ಮಣ್ಣಿಗೆ ಕಾಲಿಡುವ ಬಯಕೆ ನಮ್ಮ ಆಚಾರ ವಿಚಾರಗಳ ಬಗ್ಗೆ ಎಲ್ಲ ಆ ಕಾಣದ ಶಕ್ತಿಗಳು ನನಗರಿಯದೇನೆ ಎಲ್ಲವನ್ನೂ ನನಗೆ ತೋರಿಸಿಕೊಟ್ಟಿದೆ, ಜೊತೆಗೆ ಮರೆಯಲಾಗದ ಸಂಬಂಧಗಳು ಕೂಡ, ನಾ ಬಿದ್ದರು ಕಳಚಿ ಬೀಳದ ಸ್ನೇಹ ಸಂಬಂಧಗಳು ಮೇಲೆತ್ತುವ ಕೈಗಳು. ಸಾಮಾಜಿಕ ತಾಣದ ತುಳುನಾಡಿನ ನನ್ನ ಗೆಳೆಯರು, ಇನ್ನೇನು ಬೇಕು ಈ ಜಗದಲಿ. ಮುಂದಿನ ಜನುಮವೊಂದಿದ್ದರೆ ನನ್ನ ಹುಟ್ಟು ತುಳುನಾಡಿನಲ್ಲೇ ಆಗಬೇಕು. ಇದು ನನ್ನ ಆಸೆ.

             - ತೇಜು ಕರ್ಕೇರ(ದಿಂಚು) ಮಡಿಕೇರಿ

No comments:

Post a Comment