Monday, 10 July 2017

ತುಳು ಭಾಷೆಯನ್ನು ನಿರ್ಲಕ್ಷಿಸದಿರಿ !

Tulu should be Official Language of Karnataka

ತುಳು ಭಾಷೆಯನ್ನು ನಿರ್ಲಕ್ಷಿಸದಿರಿ !


ದಕ್ಷಿಣ ಭಾರತದಲ್ಲಿ ಸುಮಾರು 3,000 ವರ್ಷದ ಇತಿಹಾಸ ಹೊಂದಿ ಈಗಿನ ಪಂಚ ದ್ರಾವಿಡ ಭಾಷೆಗಳಲ್ಲಿ ಮೂಲ ದ್ರಾವಿಡ ಭಾಷೆಯಿಂದ ಪ್ರಪ್ರಥಮವಾಗಿ ಸ್ವತಂತ್ರವಾದ ತುಳು ಭಾಷೆಯನ್ನು ತುಳುನಾಡಿನಲ್ಲಿ(ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು, ಅಲ್ಲದೆ ಮೂಡಿಗೆರೆ, ಬಾಳೆಹೊನ್ನೂರು, ಸಂಪಾಜೆ, ಸಕಲೇಶಪುರ, ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ತಾಲೂಕುಗಳಲ್ಲಿ) ಸರ್ವಧರ್ಮದವರು ಮಾತನಾಡುತ್ತಾರೆ. ಇಂತಹ ಸಮೃದ್ಧವಾದ ಭಾಷೆಗೆ ಸ್ವಂತ ಲಿಪಿ ಕೂಡ ಇದೆ. ತುಳುವರು ವಿಶೇಷವಾಗಿ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಉದ್ಯಮ, ಸಾಹಿತ್ಯ, ನಾಟಕ, ಸಿನೆಮಾ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರು ತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುಳುನಾಡಿನ ಮೇಲೆ ಅಂದರೆ ತುಳುವರ ಮೇಲೆ ಸವಾರಿ ಮಾಡ ಹೊರಟಿದೆ. ತುಳುವರ ಎಲ್ಲ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದೆ. ತುಳುವರ ಒಕ್ಕೊರಲಿನ ಬೇಡಿಕೆಯಾದ ತುಳುಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷಿಸುತ್ತ ಬಂದಿವೆ. ಕೇಂದ್ರ ಸರಕಾರದಲ್ಲಿ ಇಬ್ಬರು ರಾಜ್ಯ ಸರಕಾರದಲ್ಲಿ ನಾಲ್ಕು ಜನ ತುಳುನಾಡಿನವರೆ ಆದ ಮಂತ್ರಿಗಳು ಇದ್ದರು ಅವರಿಂದಲೂ ತುಳುವರಿಗೆ ನ್ಯಾಯ ಸಿಗುತ್ತಿಲ್ಲ.

ಇದಕ್ಕೆ ಪೂರಕವಾಗುವಂತೆ ಶಾಲೆಗಳಲ್ಲಿ ತುಳು ಸಂಬಂಧಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳುವನ್ನು ಹೊರಗಿಡಲಾಗಿದೆ. ಇದು ಸಮಸ್ತ ತುಳುವರ ನೋವಿಗೆ ಕಾರಣವಾಗಿದೆ. ಈ ಸುತ್ತೋಲೆಗೆ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಆಯುಕ್ತರು ಸೂಕ್ತ ಉತ್ತರ ನೀಡಬೇಕು. ತುಳುಭಾಷೆಯಲ್ಲಿ ಕಲೆಗೆ ಬೇಕಾದಷ್ಟು ಸಾಹಿತ್ಯಗಳು, ಜಾನಪದಗಳಿದ್ದು ನಾವು ಅನ್ಯಭಾಷೆಯ ಸಂಸ್ಕೃತಿಯನ್ನು ಬಳಸುವ ಅನಿವಾರ್ಯತೆ ನಮಗಿಲ್ಲ. ವಿಶ್ವದ ಯಾವುದೇ ಭಾಷೆಯಲ್ಲಿ ಇರದಷ್ಟು ಅರ್ಥಕೋಶ ತುಳು ಭಾಷೆಯಲ್ಲಿ ರಚನೆಯಾಗಿದೆ. ತುಳು ಭಾಷೆಗೆ ಕೇಂದ್ರ ಸರಕಾರ ಮಾನ್ಯತೆ ನೀಡದಿದ್ದುದರಿಂದ ನಮಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಸಮಸ್ತ ತುಳುವರು ಒಂದಾಗಿ ಹೋರಾಡಬೇಕಾಗಿದೆ. ಇಲ್ಲದಿದ್ದರೆ ಅನ್ಯಭಾಷಿಗರ ದಬ್ಬಾಳಿಕೆಗೆ ನಾವು ಬಲಿಯಾಗ ಬೇಕಾದೀತು.

ಕರ್ನಾಟಕ ಏಕೀಕರಣದಲ್ಲಿ ತುಳುವರೇ ಮುಂದಾಳತ್ವ ವಹಿಸಿಕೊಂಡಿರುವುದನ್ನು ಕನ್ನಡಿಗರು ಮರೆತಂತಿದೆ. ತುಳುವರು ಕನ್ನಡಕ್ಕೆ ಸಾಕಷ್ಟು ಕೊಡುಗೆ/ಕೆಲಸಗಳನ್ನು ಮಾಡಿದ್ದಾರೆ. ತುಳುವರ ಸೌಮ್ಯತೆಯನ್ನು ದೌರ್ಬಲ್ಯ ಎಂದು ತಿಳಿದು ತಾಳ್ಮೆಯನ್ನು ಪರೀಕ್ಷೆ ಮಾಡಲು ಮುಂದಾದರೆ ಕರ್ನಾಟಕ ರಾಜ್ಯವನ್ನು ಇಬ್ಭಾಗ ಮಾಡಲು ಪ್ರಚೋದನೆ ನೀಡಿದಂತಾಗುವುದು ಅಲ್ಲದೆ ಇದು ಅನಿವಾರ್ಯ ಕೂಡ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆ ನೇರ ಹೊಣೆಯಾಗುವುದು. ತುಳು ಪ್ರತ್ಯೇಕ ರಾಜ್ಯಕ್ಕೆ ಸಮಸ್ತ ತುಳುವರೆಲ್ಲರೂ ಮುಂದಾಗಬೇಕಾದೀತು. ಕರ್ನಾಟಕ ರಾಜ್ಯದಲ್ಲಿ ಸಹೋದರತೆಯಿಂದ ಬಾಳುತ್ತಿರುವಾಗ ಇಂತಹ ದುಸ್ಥಿತಿಬೇಕೆ? ಇನ್ನಾದರೂ ಸರಕಾರಗಳು ಎಚ್ಚೆತ್ತು ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ತುಳುವರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಮುಂದಾಗಲಿ. ಇಲ್ಲದೆ ಹೋದಲ್ಲಿ ತುಳುವರು ಕಾನೂನುಬದ್ಧವಾಗಿ ಹೋರಾಟಕ್ಕೆ ಸಿದ್ಧರಾಗುತ್ತಾರೆ ಎಚ್ಚರವಿರಲಿ.

-ಜಿ.ವಿ.ಎಸ್.ಉಳ್ಳಾಲ್, ನಮ್ಮ ತುಳುನಾಡ್ ಟ್ರಸ್ಟ್

No comments:

Post a Comment