Monday, 17 July 2017

ಆಟಿ ತಿಂಗಳು:

ಆಟಿ ತಿಂಗಳು:

ಕಾರ್ತೆಲ್ ತಿಂಗಳು ಕಳೆದು ನಾವು ಕಾಲಿಡುವುದೇ ಆಟಿ ತಿಂಗಳಿಗೆ. ಸೌರಮಾನ ಪದ್ಧತಿಯ ನಾಲ್ಕನೇ ಮಾಸ ಆಟಿ ತಿಂಗಳು. ಶುಭ ಕಾರ್ಯಗಳು ಆಟಿ ಮಾಸದ ವೈರಿಗಳು. ಹೆಚ್ಚಿನ ರೋಗರುಜಿನಗಳು ಬಾಧಿಸುವ ತಿಂಗಳು ಇದೆಂದು ತುಳುಜನರ ನಂಬಿಕೆ. ಈ ತಿಂಗಳಲ್ಲಿ ಎಲ್ಲೆಲ್ಲೂ ಬಡತನ. ಕೂಡಿಟ್ಟ ಧಾನ್ಯಗಳೆಲ್ಲವು ಖಾಲಿಯಾಗಿ ಅಟ್ಟ ಗುಡಿಸುವ ಕಾಲ. ಯಾವುದೇ ಬೆಳೆಗಳನ್ನು ಬೆಳೆಯಲಾಗದ ಮಾಸವಿದು. ಗಂಡಸರು ನಾಟಿಯಿಲ್ಲದೆ ಮನೆಯಲ್ಲೇ ಇರುವಾಗ ಹೊಟ್ಟೆಯ ಹಸಿವಿಗಾಗಿ ಪ್ರಕೃತಿಯನ್ನು ಅರಸುವ ಸಮಯ. ಈ ಸಂದರ್ಭದಲ್ಲಿ ಮಾನವ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧ ಮನೆ ಮಾಡುತ್ತದೆ. ಹಸಿವಿನಿಂದಿರುವ ಮಕ್ಕಳಿಗೆ ತನ್ನೊಡಲ ಹಸಿರನ್ನು ನೀಡುವ ಭೂಮಿತಾಯಿ ಕರುಣಾಮಯಿ.
ಎಲ್ಲೆಡೆಯಲ್ಲಿ ಪಸರಿಸಿರುವ ಕೆಸುವಿನ ಎಲೆಯನ್ನು ಸುರುಳಿಯಾಗಿ ಮಡಿಸಿ ಗಂಟು ಹಾಕಿ ಮಾಡುವ ಪದಾರ್ಥ ತೇಟ್ಲ, ಪತ್ರೊಡೆ. ನುಗ್ಗೆ ಸೊಪ್ಪಿನ ಜೊತೆ ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಹಲಸಿನ ಬೀಜ ಸೇರಿಸಿ ಪಲ್ಯ. ಬುದ್ಧಿ ಬೆಳವಣಿಗೆಗೆ ತಿಮರೆ ಚಟ್ನಿ, ತಜಂಕ್ ಪಲ್ಯ, ಕಿರಾತ ಕಡ್ಡಿ ಕಷಾಯ, ಮಾವಿನಕಾಯಿ ಗೊಜ್ಜು ಪಲ್ಯ, ಹಲಸಿನ ಸೊಳೆ (ಉಪ್ಪಡ್ ಪಚ್ಚಿಲ್), ಉಪ್ಪಿನಕಾಯಿ, ಕಣಿಲೆ (ಎಳೆ ಬಿದಿರು)ಪಲ್ಯ. ವಿವಿಧ ಬಗೆಯ ಹಪ್ಪಳಗಳು, ಹುರಿದ ಹುಣಸೆ ಬೀಜ ಸಂಜೆ ಹೊತ್ತಿಗೆ ಮಳೆಗೆ ಬಚ್ಚನೆ ಮುದು ನೀಡುವ ಕುರುಕುರು ತಿನಿಸುಗಳು. ಮೆತ್ತೆಗಂಜಿ, ಒಲ್ಲೆಕೊಡಿ ಕಷಾಯಗಳು ತುಳುಜನರ ಹಸಿವಿಗಾಗುವ ಅಮೃತಗಳು. ಪಟ್ಟಿ ಮಾಡಿದರೆ ಮಗಿಯದ ತಿನಿಸುಗಳ ಸಾಲುಗಳು.

ಆಟಿ ಅಮಾವಾಸ್ಯೆ ಎಂದರೆ ಹಾಲೆ ಮರದ ತೊಗಟೆಯ ಕಷಾಯ (ಪಾಲೆದ ಕೆತ್ತೆದ ಕಷಾಯ)ವೆಂದೇ ಹೆಸರುವಾಸಿಯಾಗಿರವ ರಥದ ಅಕಾರದಲ್ಲಿ ಗೆಲ್ಲು ಎಲೆಗಳನ್ನು ಹರಡಿ, ಎತ್ತರಕ್ಕೆ ಬೆಳೆಯುವ ಹಾಲೆ ಮರದ ಹಾಲನ್ನು ಕುಡಿದು ಬೆಲ್ಲ ಚಪ್ಪರಿಸುವ ಸಂಭ್ರಮ. ಕಡು ಕಷ್ಟದ ತಿಂಗಳೆಂದೇ ಉಲ್ಲೇಖವಿರುವ ಆಟಿ ಮಾಸದಲ್ಲಿ ಅಮಾವಾಸ್ಯೆ ಹಿಂದಿನ ದಿನ ಸಂಜೆ ಮರಕ್ಕೆ ನೂಲು ಕಟ್ಟಿ ‘ನಾಳೆ ಬರುತ್ತೇನೆ ಮದ್ದು ಸಿದ್ಧ ಮಾಡಿ ಇಡು’ ಎಂದು ವನದೇವತೆಯನ್ನು ಪ್ರಾರ್ಥಿಸಿ ಬರುವ ಕ್ರಮವಿದೆ. ಮರುದಿನ ಸೂರ್ಯ ಹುಟ್ಟುವ ಮುನ್ನ ಗಂಡಸರು ಬೆತ್ತಲೆಯಾಗಿ ಹಾಲೆ ಮರದ ಬಳಿ ಹೋಗಿ, ಕಲ್ಲಿನಿಂದ ಹಾಲೆಯ ತೊಗಟೆಯನ್ನು ಜಜ್ಜಿಕೊಂಡು ಬರುವುದು. ತೆಗೆದ ರಸವನ್ನು ಕರಿಮೆಣಸು, ಜೀರಿಗೆ, ಓಮ, ಬೆಳ್ಳುಳ್ಳಿ ಜೊತೆ ಅರೆದು ಮಿಶ್ರಣ ಮಾಡಿ, ಬೊರ್ಗಲ್ (ಬೆಣಚು ಕಲ್ಲು) ಅನ್ನು ಬಿಸಿ ಮಾಡಿ ಮಿಶ್ರಣಕ್ಕೆ ಮುಳುಗಿಸುತ್ತಾರೆ. ನಂತರ ಸಾಸಿವೆ ಒಗ್ಗರಣೆ ಕೊಟ್ಟು ಖಾಲಿ ಹೊಟ್ಟೆಗೆ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಕಷಾಯವನ್ನು ಕುಡಿಯುತ್ತಾರೆ. ಬಾಯಿಯ ಕಹಿಗೆ ಬೆಲ್ಲ, ಉಷ್ಣಕ್ಕೆ ದೇಹಕ್ಕೆ ತಂಪಾದ ಮೆತ್ತೆಗಂಜಿ ಸೇವಿಸುವುದು ವಾಡಿಕೆ. ನವೆಂಬರ್-, ಡಿಸೆಂಬರ್ ತಿಂಗಳಲ್ಲಿ ಹೂ ಬಿಡುವ ಈ ಮರದಲ್ಲಿ ಆಟಿ ಅಮಾವಾಸ್ಯೆಯ ದಿನ ಸಾವಿರದ ಒಂದು ಬಗೆಯ ಔಷಧಿಗಳು ಸೇರಿಕೊಂಡಿರುತ್ತವೆ ಎಂಬ ನಂಬಿಕೆ ಇದೆ. ಇದರ ಹೂವಿನ ಪರಿಮಳ ಮತ್ತೇರಿಸುವಂತಹದ್ದು, ಮನುಷ್ಯ ಬಿಟ್ಟು ದುಂಬಿಗಳು ಕೂಡ ಮರದ ಬಳಿ ಸುಳಿಯುವುದಿಲ್ಲ. ಹಾಲೆ ಮರದ ತಾಯಿ ಬೇರು ಕಂಡವರಿಲ್ಲ ಎಂಬ ಮಾತು ಕೂಡ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ.

ಊರಿಗೆ ಹಿಡಿದಿರುವ ಎಲ್ಲ ದೋಷಗಳನ್ನು ಓಡಿಸುವ ಸಲುವಾಗಿ ಊರಗಡಿಯಾಚೆ ಮಾರಿಗೆ ಪ್ರಾಣಿಗಳನ್ನು ಬಲಿ ಕೊಡುವ ‘ಮಾರಿ ದೇರುನಿ’ ಸಹ ಆಟಿ ತಿಂಗಳ ಪದ್ಧತಿಗಳಲ್ಲಿ ಒಂದು.
ದುಡಿಮೆಗೆ ವಿರಾಮ ನೀಡಿರುವ ಈ ಸಮಯದಲ್ಲಿ ತುಳುಜನರು ಆಟಗಳ ಕಡೆಗೆ ಮನಹರಿಸುತ್ತಾರೆ. ಚೆನ್ನೆಮಣೆ, ಪೊಕ್ಕು, ಸರಿಮುಗುಳಿ, ಎದ್‌ರ್ ದೆಸೆ (ಒಬ್ಬರ ಒಗಟಿಗೆ ಇನ್ನೊಬ್ಬರು ಉತ್ತರಿಸುವುದು), ತೆಂಗಿನಕಾಯಿ ಆಟಗಳೆಲ್ಲವೂ ಮನಸ್ಸಿಗೆ ಮುದ ನೀಡುವಂತಹ ಆಟಗಳು. ಕತ್ತಲಾವರಿಸಿದಾಗ ಮನೆಮಂದಿಯೆಲ್ಲಾ ಸೇರಿಕೊಂಡು ಸಂತೋಷಕ್ಕಾಗಿ ಪಾರ್ದನ (ತುಳುವ ದೈವಗಳ ಮತ್ತು ವೀರ ಪುರುಷರ ಚರಿತ್ರೆಯನ್ನು ಹೇಳುವ ಜನಪದ ಪದ್ಯಗಳು) ಹಾಡುವ ಕಾಲವಿದು.

ತುಳುನಾಡಿನ ಜಾನಪದ ಸಂಸ್ಕೃತಿಯಲ್ಲಿ ಚೆನ್ನೆಮಣೆಯಾಟ ಬಹಳ ಪ್ರಾಚೀನವಾದುದು. ಉಳಿದ ಸಮಯದಲ್ಲಿ ಮನೆಯ ಅಟ್ಟದಲ್ಲಿ ಬೆಚ್ಚಗೆ ನೆಲೆ ಕಾಣುವ ಚೆನ್ನೆಮಣೆ ಆಟಿ ತಿಂಗಳಲ್ಲಿ ಮಾತ್ರವೇ ಕೆಳಗಿಳಿಯತ್ತದೆ. ಹಿಂದೆ ಹೊಂಗಾರಕನ ಮರದ ಕಾಯಿಗಳನ್ನು ಆಟದಲ್ಲಿ ಬಳಸುತ್ತಿದ್ದರು ಆದರೆ ಈಗ ಅಂತಹ ಕಾಯಿಗಳು ಅಪರೂಪವಾಗಿರುವುದರಿಂದ ಕವಡೆಕಾಯಿ, ಮಂಜಟ್ಟಿ ಕಾಯಿಗಳನ್ನು ಉಪಯೋಗಿಸುವುದನ್ನು ಕಾಣುವೆವು.
ವರ್ಷವಿಡೀ ಗಂಡನ ಮನೆಯಲ್ಲಿ ಬೆವರು ಸುರಿಸುವ ಹೆಣ್ಣುಮಗಳು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಚೇತರಿಸಿಕೊಳ್ಳಲು ತವರು ಮನೆಗೆ ಬಂದು (ಆಟಿ ಕುಲ್ಲುನಿ) ಆಟಿ ಕಳೆಯುವುದು ಆಚರಣೆಯಲ್ಲಿ ಬಂದದ್ದು. ರೋಗ ನಿರೋಧಕ ಎನ್ನುವ ಕಾರಣಕ್ಕೆ ಆಟಿಯಲ್ಲಿ ಗದ್ದೆಗೆ, ಮೊದಲ ಬೆಳೆಗೆ ಕಾಸರ್ಕನ ಮರದ ಗೆಲ್ಲನ್ನು ನೆಡುತ್ತಾರೆ. ಗೆಲ್ಲಿನ ಕಹಿಯನ್ನು ಭತ್ತ ಹೀರಿಕೊಂಡಾಗ ಭತ್ತಕ್ಕೆ ಬಂದಿರುವ ರೋಗ ನಿವಾರಣೆಯಾಗುವುದು ಎನ್ನುವರು.
ಊರಿಗೆ ಹಿಡಿದಿರುವ ಕಾಯಿಲೆಗಳನ್ನು, ತೊಂದರೆಗಳನ್ನು ನಿವಾರಿಸುವವನೇ ಆಟಿ ಕೆಳೆಂಜ. ತುಳುನಾಡಿ ತೆಂಕಣ- ಪೂರ್ವ ಪ್ರದೇಶದಲ್ಲಿ ದೈವ ನರ್ತಕರು (ಬಹುತೇಕ ನಲಿಕೆಯವರು) ಕುಣಿಯುವ ಜಾನಪದ ನೃತ್ಯ. ಊರು, ಮನೆಮನೆಗೆ ಸಂಚರಿಸಿ ಆಟಿ ಕೆಳೆಂಜ ಸಂದೇಶವನ್ನು ಸಾರುತ್ತಾನೆ. ಅರಶಿನ ಪುಡಿ ಮತ್ತು ಮಸಿಯನ್ನು ಮಂತ್ರಿಸಿ ಮನೆತನಕ್ಕೆ ಬರುವ ಪೀಡೆ, ದೋಷಗಳು ನಿವಾರಣೆಯಾಗಲೆಂದು ಸುತ್ತ ಎಸೆಯುತ್ತಾನೆ. ಹೀಗೆ ಕುಣಿಯುವ ನರ್ತಕರಿಗೆ ಅಕ್ಕಿ, ಭತ್ತ, ತರಕಾರಿ, ಹಣ ದಾನ ನೀಡುವರು.

ಆಟಿ ಅಮಾವಾಸ್ಯೆಯ ದಿನ ತೀರ್ಥ ಸ್ನಾನ ಮಾಡುವುದು ಕೂಡ ಪ್ರಸಿದ್ಧಿಯಾಗಿದೆ. ಆ ದಿನದಂದು ಎಲ್ಲಾ ಬಗೆಯ ತೀರ್ಥಗಳು ಘಟಿಕಾದಲ್ಲಿ ಸೇರಿರುತ್ತವೆ ಎಂಬುದು ನಂಬಿಕೆ. ಕೊಡಿಪ್ಪಾಡಿ, ಕಾರಿಂಜಬೆಟ್ಟ, ನರಹರಿ ಪರ್ವತ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ತೀರ್ಥ, ಸಮುದ್ರಸ್ಥಾನ, ಕೇರಳದ ಮುಜುಂಗಾವು, ಧರ್ಮಸ್ಥಳ ಮುಂತಾದೆಡೆಗಳಲ್ಲಿ ಆ ದಿನ ಪವಿತ್ರ ತೀರ್ಥ ಸ್ನಾನ ನಡೆಯುತ್ತದೆ.
ಆಟಿ ತಿಂಗಳ ಕೊನೆಯಲ್ಲಿ ಆಚರಿಸುವುದೇ ನಾಗರಪಂಚಮಿ. ಇಂದು ಇಂತಹ ಆಚರಣೆಗಳನ್ನೆಲ್ಲ ನಾವು ಹಳ್ಳಿ ಪ್ರದೇಶಗಳಲ್ಲೂ ಕಾಣುವುದು ಅಪರೂಪ. ಆಚರಣೆಗಳೆಲ್ಲವು ಇತಿಹಾಸದ ಪುಟಗಳಲ್ಲಿ ಅಕ್ಷರದ ರೂಪ ತಾಳುತ್ತಿವೆ.

ಮೇಘಲಕ್ಷ್ಮಿ

No comments:

Post a Comment